ಮುಗಿಯದ ಕಥೆ 

ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರ ವ್ಯಾಪ್ತಿಯ ಕುರಿತು ನಡೆಯುತ್ತಿರುವ ಕಾನೂನು ಹೋರಾಟವು ಮುಗಿಯದ ಕಥೆಯಾಗಿದೆ. ಇತ್ತೀಚಿನ ಸುತ್ತಿನಲ್ಲಿ, ದೆಹಲಿಯಲ್ಲಿ ಆಡಳಿತ ಸೇವೆಗಳನ್ನು ನಿಯಂತ್ರಿಸುವ ಹೊಸ ಆಯೋಗವನ್ನು ರಚಿಸಲು ಭಾರತದ ರಾಷ್ಟ್ರಪತಿಗಳು ಇತ್ತೀಚೆಗೆ ಹೊರಡಿಸಿದ ಸುಗ್ರೀವಾಜ್ಞೆಯ ಕಾನೂನುಬದ್ಧತೆಯನ್ನು ಸಂವಿಧಾನ ಪೀಠವು ಪರಿಶೀಲಿಸುತ್ತಿದೆ. ಇದು ಕಳೆದ ಕೆಲವು ವರ್ಷಗಳಲ್ಲಿ ದೆಹಲಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಧಿಕಾರ ವ್ಯಾಪ್ತಿಯ ಕುರಿತು ಪರಿಶೀಲಿಸುತ್ತಿರುವ ಮೂರನೇ ಐದು ಸದಸ್ಯರ ಪೀಠವಾಗಿದೆ. ವಿವಾದದ ತಿರುಳೇನೆಂದರೆ ರಾಜ್ಯ ಪಟ್ಟಿಯಡಿ ‘ಎಂಟ್ರಿ ೪೧’ ಆಗಿರುವ ‘ಸೇವೆಗಳ’ ವಿಷಯವು ದೆಹಲಿ ಸರ್ಕಾರದ ಕಾರ್ಯಾಂಗ ಮತ್ತು ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆಯೇ ಹೊರತು ಕೇಂದ್ರದ್ದಲ್ಲ ಎಂದು ತೀರ್ಪು ನೀಡಿದ ಇತ್ತೀಚಿನ ಸಂವಿಧಾನ ಪೀಠದ ತೀರ್ಪನ್ನು ರದ್ದುಗೊಳಿಸಲು ಸುಗ್ರೀವಾಜ್ಞೆ ಪ್ರಯತ್ನಿಸಿದೆ. ನ್ಯಾಯಾಲಯದ ಹಿಂದಿನ ಆದೇಶದ ತರ್ಕ ಸರಳವಾಗಿತ್ತು: ದೆಹಲಿಯ ಆಡಳಿತ ವ್ಯವಹಾರಗಳನ್ನು ನಿಯಂತ್ರಿಸುವ ಸಂವಿಧಾನದ ೨೩೯ಎಎ ವಿಧಿಯಡಿ ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭೂಮಿಯ ಮೂರು ವಿಷಯಗಳನ್ನು ಮಾತ್ರ ದೆಹಲಿ ಸರ್ಕಾರದ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಮತ್ತು ಉಳಿದ ಎಲ್ಲ ವಿಷಯಗಳ ಮೇಲೆ ದೆಹಲಿ ಸರ್ಕಾರಕ್ಕೆ ಸಂಪೂರ್ಣ ನಿಯಂತ್ರಣ ಇದೆ. ‘ಸೇವೆಗಳು’ ಹೊರಗಿಡಲಾದ ವಿಷಯಗಳಲ್ಲಿ ಒಂದಾಗಿಲ್ಲದ ಕಾರಣ, ಅಧಿಕಾರಿಗಳ ನೇಮಕಾತಿ ಮತ್ತು ವರ್ಗಾವಣೆಗಳ ಮೇಲಿನ ದೆಹಲಿ ಸರ್ಕಾರದ ಅಧಿಕಾರವನ್ನು ಅದು ಎತ್ತಿಹಿಡಿಯಿತು. ಸೇವೆಗಳನ್ನು ದೆಹಲಿ ಸರ್ಕಾರದ ವ್ಯಾಪ್ತಿಯ ಹೊರತಂದು ಕೇಂದ್ರದ ವ್ಯಾಪ್ತಿಯನ್ನು ವಿಸ್ತರಿಸುವ ಯಾವುದೇ ಪ್ರಯತ್ನವು ದೆಹಲಿ ಆಡಳಿತದ ಸಾಂವಿಧಾನಿಕ ಯೋಜನೆಗೆ ವಿರುದ್ಧವಾಗಿದೆ ಎಂದು ಅದು ತೀರ್ಪು ನೀಡಿತ್ತು.

ದೆಹಲಿ ಆಡಳಿತ ಸೇವಾ ಆಯೋಗವನ್ನು ರಚಿಸುವ ಕೇಂದ್ರದ ಸುಗ್ರೀವಾಜ್ಞೆಯು ದೆಹಲಿ ರಾಜ್ಯ ಸರ್ಕಾರದ ಹೊರಗಿಟ್ಟ ವಿಷಯಗಳ ಪಟ್ಟಿಗೆ ನಾಲ್ಕನೇ ವಿಷಯವನ್ನು ಸೇರಿಸಿ ಅದರ ಪರಿಣಾಮದಲ್ಲಿ ಸಂವಿಧಾನದ ೨೩೯ಎಎ ವಿಧಿಯನ್ನು ತಿದ್ದುಪಡಿ ಮಾಡುತ್ತದೆ ಎಂದು ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠವು ಅಭಿಪ್ರಾಯ ಪಟ್ಟು ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿತು. ಆದರೆ ಇದು ಅಸಿಂಧು ಆಗದಿರುವ ಸಾಧ್ಯತೆಯಿದೆ. ೨೩೯ಎಎ ವಿಧಿಯ ಕ್ಲಾಸ್ ೭ ಈ ವಿಧಿಯನ್ನು ಜಾರಿಗೆ ತರಲು ಅಥವಾ ಇದಕ್ಕೆ ಪೂರಕವಾಗುವಂತೆ ಹೊಸ ಕಾನೂನುಗಳನ್ನು ರೂಪಿಸಲು ಸಂಸತ್ತಿಗೆ ಅಧಿಕಾರ ನೀಡುತ್ತದೆ. ಇದಲ್ಲದೆ ಇಂತಹ ಕಾನೂನುಗಳು ಅವುಗಳ ಪರಿಣಾಮದಲ್ಲಿ ಸಂವಿಧಾನದ ತಿದ್ದುಪಡಿಯೆ ಆಗಿದ್ದರೂ ಅವುಗಳನ್ನು ಹಾಗೆ ಪರಿಗಣಿಸಲಾಗುವುದಿಲ್ಲ ಎಂದು ಈ ಕ್ಲಾಸ್ ಸ್ಪಷ್ಟಪಡಿಸುತ್ತದೆ. ಅಂತಹ ಕಾನೂನನ್ನು ಜಾರಿಗೊಳಿಸಲು ಸಂಸತ್ತಿನ ಅಧಿಕಾರವನ್ನು ನ್ಯಾಯಾಲಯವು ಒಪ್ಪಿಕೊಂಡಿದ್ದರೂ, ವಿಶೇಷವಾಗಿ ಚುನಾಯಿತ ದೆಹಲಿ ಸರ್ಕಾರದ ವ್ಯಾಪ್ತಿಯಿಂದ ಆಡಳಿತ ಸೇವೆಗಳನ್ನು ಹೊರಗಿಡುವ ಈ ಸುಗ್ರೀವಾಜ್ಞೆಯ ಹಿನ್ನೆಲೆಯಲ್ಲಿ ಈ ಅಧಿಕಾರವನ್ನು ಕೇಂದ್ರವು ಬಳಸಿರುವ ರೀತಿ ಮಾನ್ಯವಾಗಿದೆಯೇ ಎಂದು ಪರಿಶೀಲಿಸಬಹುದು ಎಂದು ಕೋರ್ಟ್ ಸೂಚಿಸಿದೆ. ದೆಹಲಿಯಲ್ಲಿ ಅಸ್ತಿತ್ವದಲ್ಲಿರುವ ಆಡಳಿತ ರಚನೆಯನ್ನು ಬದಲಾಯಿಸಲಾಗದು ಎಂದು ಒಂದು ನಿಯಮ ಸೂಚಿಸಿದರೆ, ಇನ್ನೊಂದು ನಿಯಮ ಇದನ್ನು ಅನುಮತಿಸುವಂತಿದ್ದು ಸಂವಿಧಾನದಲ್ಲೇ ವಿರೋಧಾಭಾಸ ಇದೆ ಎಂದು ನ್ಯಾಯಾಲಯ ಗಮನಿಸಿದೆ. ಈ ಗೊಂದಲವನ್ನು ನಿವಾರಿಸಲು ತೀರ್ಪು ನೀಡುವ ಅಗತ್ಯವಿದೆ ಎಂದು ಅದು ಹೇಳಿದೆ. ಕಾನೂನಾತ್ಮಕವಾಗಿ ಸಂವಿಧಾನದ ೨೩೯ಎಎ ವಿಧಿಯ ಕ್ಲಾಸ್ ೭ರಡಿ ಕಾನೂನುಗಳನ್ನು ರೂಪಿಸಲು ಸಂಸತ್ತಿನ ಅಧಿಕಾರ ಮತ್ತು ಈ ಅಧಿಕಾರವನ್ನು ಚಲಾಯಿಸುವಾಗ ಅದು ದೆಹಲಿಯ ಆಡಳಿತ ತತ್ವಗಳನ್ನು ಮೀರಬಹುದೇ ಎಂದು ಅದು ತೀರ್ಪು ನೀಡುತ್ತದೆ. ಆದರೆ ರಾಜಕೀಯ ಮತ್ತು ಈ ಸರ್ಕಾರಗಳ ನಾಯಕರ ನಡುವಿನ ವೈಯಕ್ತಿಕ ಕಲಹ ಇಷ್ಟರಲ್ಲೇ ಮುಗಿಯುವ ಸಾಧ್ಯತೆಯಿಲ್ಲ.